CATEGORIES

NEWSLETTER


ಉಪನಿಷತ್ತುಗಳಲ್ಲಿ `ಅನ್ನ’

ಪ್ರಪಂಚದಲ್ಲಿರುವ ಯಾವ ಜೀವಿಯೂ ಸಹ ಆಹಾರವಿಲ್ಲದೇ ಬದುಕಲಾರದು.  ಜೀವಿಗಳಲ್ಲಿ ಜೀವ ಇರಬೇಕಾದರೆ ಆಹಾರ ಬೇಕೇ ಬೇಕು.  ಅದು ಗಾಳಿ, ನೀರು, ಮಣ್ಣು, ಸಸ್ಯ, ಮಾಂಸಾಹಾರೀ ಪ್ರಾಣಿಗಳಿಗೆ ಮಾಂಸ, ಯಾವುದೇ ಇರಬಹುದು.  ಆದ್ದರಿಂದಲೇ ತೈತ್ತಿರೀಯೋಪನಿಷತ್ತಿನಲ್ಲಿ ಹೀಗೆ ಹೇಳಿದೆ –  ‘ಅನ್ನಾದ್ವೈ ಪ್ರಜಾಃ ಪ್ರಜಾಯಂತೇ’ – ಅನ್ನದಿಂದಲೇ (ಆಹಾರದಿಂದಲೇ) ಜೀವಿಗಳು ಹುಟ್ಟುತ್ತವೆ ಎಂದು.  ಇದರಿಂದಲೇ ನಮಗೆ ಜೀವಿ ಮತ್ತು ಆಹಾರಕ್ಕಿರುವ ಅವಿನಾಭಾವ ಸಂಬಂಧ ತಿಳಿಯುತ್ತದೆ.  ಆಹಾರದಿಂದಲೇ ಜೀವಿಗಳು ತಮ್ಮ ಜೀವವನ್ನು ರಕ್ಷಿಸಿಕೊಳ್ಳುತ್ತವೆ ಅಥವಾ ಆಹಾರವಿಲ್ಲದೇ ಜೀವವನ್ನು ಬಿಡುತ್ತವೆ.  ಹೀಗೆ ಆಹಾರಾಧೀನವಾಗಿದೆ ಜೀವಿಗಳ ಜೀವನ.
ಜೀವಿಗಳಲ್ಲೆಲ್ಲಾ ಶ್ರೇಷ್ಠ ಜೀವಿ ಮಾನವ.  ಅವನಲ್ಲಿರುವ ಮಾನಸಿಕ ಶಕ್ತಿ ಮತ್ತು ಬೌದ್ಧಿಕ ಶಕ್ತಿ ಅವನನ್ನು ಶ್ರೇಷ್ಠಜೀವಿಯನ್ನಾಗಿಸಿದೆ.  ಈ ಮನುಷ್ಯನೂ ಸಹ ಆಹಾರವಿಲ್ಲದೇ ಜೀವಿಸಲಾರ.  ಆಧುನಿಕ ಯುಗದಲ್ಲಿ ಮನುಷ್ಯ ತನ್ನ ಹೊಟ್ಟೆ ತುಂಬಿಸಿಕೊಳ್ಳುವುದಕ್ಕಾಗಿ ಎಂತಹ ನೀಚವೃತ್ತಿಯನ್ನು ಮಾಡಲೂ ಸಹ ಹೇಸುವುದಿಲ್ಲ.  ತಿನ್ನುತ್ತಿರುವ ಆಹಾರ ಶುದ್ಧವೋ, ಅಶುದ್ಧವೋ, ಆರೋಗ್ಯದಾಯಕವೋ, ಅನಾರೋಗ್ಯಕರವೋ ಎಂಬುದನ್ನು ವಿವೇಚಿಸುವುದೂ ಇಲ್ಲ.  ಹಾಗೆಯೇ ಕಣ್ಣುಮುಚ್ಚಿ ಹೊಟ್ಟೆಯೆಂಬ ಚೀಲವನ್ನು ತುಂಬುತ್ತಿದ್ದಾನೆ.  ಇದಕ್ಕೆಲ್ಲ ಕಾರಣ ಆಹಾರದ ವಿಷಯದಲ್ಲಿ ಮಾನವನಿಗಿರುವ ಅಜ್ಞಾನ.  ತಾನು ತಿನ್ನುತ್ತಿರುವ ಆಹಾರವೇ ತನ್ನ ದೇಹವಾಗಿ, ಮನಸ್ಸಾಗಿ, ಬುದ್ಧಿಯಾಗಿ ಪರಿವರ್ತನೆಯಾಗುತ್ತದೆಂಬುದು ಬಹುಪಾಲು ಮಾನವರಿಗೆ ತಿಳಿದಿಲ್ಲ.  ಈ ಲೇಖನದಲ್ಲಿ ಆಹಾರವು ನಮ್ಮ ದೇಹವನ್ನು ಹೇಗೆ ಪೋಷಿಸುತ್ತದೆ ಎಂದು ಛಾಂದೋಗ್ಯೋಪನಿಷತ್ತಿನಲ್ಲಿರುವ ಮಂತ್ರಗಳ ಆಧಾರದಲ್ಲಿ ವಿವೇಚಿಸಲಾಗಿದೆ.
‘ಅದ್ಯತೇ ಅತ್ತಿ ಚ ಭೂತಾನಿ ತಸ್ಮಾದನ್ನಂ ತದುಚ್ಯತೇ’ – ಎಂಬ ಮಂತ್ರ ತೈತ್ತಿರೀಯೋಪನಿಷತ್ತಿನಲ್ಲಿ ಇದೆ.  ಯಾವುದನ್ನು ಜೀವಿಗಳು ತಿನ್ನುತ್ತವೋ ಅದು ಅನ್ನ (ಆಹಾರ).  ಆದ್ದರಿಂದ ಮನುಷ್ಯ ಸೇವಿಸುವ ಎಲ್ಲ ಆಹಾರವೂ ಅನ್ನವೆನಿಸುತ್ತದೆ.  ಹಾಗೆಯೇ ಯಾವುದರಿಂದ ಜೀವಿಗಳು ತಿನ್ನಲ್ಪಡುತ್ತವೋ ಅದೂ ಆಹಾರವೇ.  ಅಂದರೆ ನಾವು ತಿಂದ ಆಹಾರವು ನಮ್ಮನ್ನು ತಿನ್ನುತ್ತದೆ (!) ಎಂದು ಮಂತ್ರವು ತಿಳಿಸುತ್ತದೆ.  ಇದು ಮನುಷ್ಯನಿಗೆ ಎಚ್ಚರಿಕೆಯ ಗಂಟೆ.  ದೇಹ-ಮನಸ್ಸುಗಳಿಗೆ ಹೊಂದದಂತಹ ಅನಾರೋಗ್ಯಕರವಾದ ಆಹಾರವನ್ನು ಸೇವಿಸಿದರೆ ಅದು ನಮ್ಮನ್ನು ನಾಶಗೊಳಿಸುವುದು ನಿಶ್ಚಿತ.  ಆದ್ದರಿಂದ ಶುದ್ಧವಾದ, ಆರೋಗ್ಯಕರವಾದ ಆಹಾರವನ್ನು ಸೇವಿಸುವುದು ವಿವೇಕಿಯಾದ ಮಾನವನ ಕರ್ತವ್ಯ.
ನಾವು ತಿಂದಂತಹ ಆಹಾರವೇ ದೇಹಪೋಷಕವಾದ ಸಪ್ತಧಾತುಗಳಾಗಿ ಪರಿಣಮಿಸುತ್ತದೆ.  ರಸ, ರಕ್ತ, ಮಾಂಸ, ಮೇದಸ್ಸು, ಮೂಳೆ, ಮಜ್ಜೆ ಮತ್ತು ಶುಕ್ರ ಇವುಗಳೇ ಸಪ್ತಧಾತುಗಳು.  ಇದನ್ನೇ ಛಾಂದೋಗ್ಯೋಪನಿಷತ್ತಿನ 6ನೇ ಅಧ್ಯಾಯದಲ್ಲಿ ಹೀಗೆ ಹೇಳಿದ್ದಾರೆ.
‘ಅನ್ನಮಶಿತಂ ತ್ರೇಧಾ ವಿಧೀಯತೇ|  ತಸ್ಯ ಯಃ ಸ್ಥವಿಷ್ಠೋ ಧಾತುಃ ತತ್ಪುರೀಷಂ ಭವತಿ|  ಯೋ ಮಧ್ಯಸ್ತನ್ಮಾಂಸಂ, ಯೋಣಿಷ್ಠಃ ತನ್ಮನಃ|’
– ನಾವು ಸೇವಿಸಿದಂತಹ ಅನ್ನವು (ಪಂಚಭೂತಗಳಲ್ಲೊಂದಾದ ಪೃಥ್ವೀಪ್ರಧಾನವಾಗಿರುವ ಆಹಾರ) ಮೂರು ಭಾಗವಾಗಿ ಪರಿಣಾಮ ಹೊಂದುತ್ತದೆ.   1. ಅನ್ನದ ಸ್ಥೂಲವಾದ ಭಾಗವು ಮಲವಾಗಿ ಹೊರಹೋಗುತ್ತದೆ.  2. ಅದಕ್ಕಿಂತ ಸೂಕ್ಷ್ಮವಾದ ಭಾಗವು ರಸ, ರಕ್ತ, ಮಾಂಸಗಳಾಗಿ ರೂಪುಗೊಳ್ಳುತ್ತದೆ.  3. ಅತ್ಯಂತ ಸೂಕ್ಷ್ಮವಾದ ಭಾಗವು ಮನಸ್ಸಾಗಿ ಪರಿಣಾಮ ಹೊಂದುತ್ತದೆ.
‘ಆಪಃ ಪೀತಾಃ ತ್ರೇಧಾ ವಿಧೀಯಂತೇ|  ತಾಸಾಂ ಯಃ ಸ್ಥವಿಷ್ಠೋ ಧಾತುಃ ತನ್ಮೂತ್ರಂ ಭವತಿ|  ಯೋ ಮಧ್ಯಮಸ್ತಲ್ಲೋಹಿತಮ್|  ಯೋಣಿಷ್ಠಃ ಸ ಪ್ರಾಣಃ|’
– ನಾವು ಸೇವಿಸಿದ ನೀರೂ (ಜಲಪ್ರಧಾನವಾದ ಆಹಾರ) ಸಹ ಮೂರು ಭಾಗವಾಗಿ ಪರಿಣಮಿಸುತ್ತದೆ.  1. ನೀರಿನ ಸ್ಥೂಲವಾದ ಭಾಗವು ಮೂತ್ರವಾಗಿ ಪರಿಣಮಿಸುತ್ತದೆ.  2. ಅದಕ್ಕಿಂತ ಸೂಕ್ಷ್ಮವಾದ ಭಾಗವು ಶುಕ್ರವಾಗಿ ಪರಿಣಮಿಸುತ್ತದೆ.  3. ಅದಕ್ಕಿಂತಲೂ ಸೂಕ್ಷ್ಮವಾದ ಭಾಗವು ಪ್ರಾಣವಾಗುತ್ತದೆ.
‘ತೇಜೋ ಅಶಿತಂ ತ್ರೇಧಾ ವಿಧೀಯತೇ|  ತಸ್ಯ ಯಸ್ಥವಿಷ್ಠೋ ಧಾತುಃ ತದಸ್ಥಿ ಭವತಿ|  ಯೋ ಮಧ್ಯಮಃ ಸ ಮಜ್ಜಾ|  ಯೋಣೀಷ್ಠಃ ಸಾ ವಾಕ್|’
ನಾವು ಸೇವಿಸಿದ ಅಗ್ನಿತತ್ವವುಳ್ಳ ಆಹಾರವೂ ಮೂರು ವಿಭಾಗವಾಗುತ್ತದೆ.  1. ಸ್ಥೂಲವಾದ ಭಾಗವು ಮೂಳೆಯಾಗುತ್ತದೆ.  2. ಸೂಕ್ಷ್ಮವಾದ ಭಾಗವು ಮಜ್ಜಾ (ಮೂಳೆಯ ಒಳಗಿರುವ ಜಿಡ್ಡು) ಆಗುತ್ತದೆ.  3. ಅತ್ಯಂತ ಸೂಕ್ಷ್ಮವಾದ ಭಾಗವು ಮಾತಾಗಿ ಪರಿವರ್ತನೆಯಾಗುತ್ತದೆ.
ಹೀಗೆ ನಮ್ಮ ದೇಹದ ರಕ್ಷಣೆಗೆ ಬೇಕಾಗುವ ಸಪ್ತಧಾತುಗಳಾಗಿ, ಮನಸ್ಸಾಗಿ, ಪ್ರಾಣವಾಗಿ, ಮಾತಾಗಿ ರೂಪಾಂತರಗೊಳ್ಳುವುದು ನಾವು ತಿಂದ ಆಹಾರವೇ.  ಇದು ಈ ಮೇಲ್ಕಂಡ ಮಂತ್ರಗಳಿಂದ ಸುಸ್ಪಷ್ಟವಾಗಿದೆ.  ಆದ್ದರಿಂದ ನಾವು ಆಹಾರವನ್ನು ಕೇವಲ ಆಹಾರವೆಂದು ನೋಡದೇ ಅದರಿಂದಾಗುವ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಆಹಾರವನ್ನೇ ಸೇವಿಸಬೇಕು.
ನಾವು ಸೇವಿಸಿದ ಅನ್ನದಿಂದಲೇ ನಮ್ಮ ದೇಹ, ಮನಸ್ಸು, ಬುದ್ಧಿಗಳ ವಿಕಾಸವಾಗುತ್ತದೆ.  ಈಗ ಸಹಜವಾಗಿಯೇ ಒಂದು ಪ್ರಶ್ನೆ ಮೇಲೇಳುತ್ತದೆ.  ಯಾವ ಆಹಾರವನ್ನು ಸೇವಿಸಿದರೆ ಮನಸ್ಸು, ಬುದ್ಧಿ, ದೇಹಗಳು ಆರೋಗ್ಯಕರವಾಗಿ, ಉತ್ಸಾಹಭರಿತವಾಗಿ, ಶುದ್ಧವಾಗಿ ಇರುತ್ತವೆ?  ಈ ಪ್ರಶ್ನೆಗೆ ಉಪನಿಷತ್ತಿನ ಸಾರವಾದ ಭಗವದ್ಗೀತೆಯಲ್ಲಿ ಸ್ಪಷ್ಟವಾದ ಉತ್ತರ ದೊರೆಯುತ್ತದೆ.
ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಆಹಾರವನ್ನು ಮೂರು ವಿಧವಾಗಿ ವಿಂಗಡಿಸಿದ್ದಾನೆ.  ಸಾತ್ವಿಕ, ರಾಜಸಿಕ ಮತ್ತು ತಾಮಸಿಕ.  ಸಾತ್ವಿಕ ಆಹಾರ ಯಾವುದೆಂದರೆ – ಆಯುಸ್ಸತ್ವಬಲಾರೋಗ್ಯ ಸುಖಪ್ರೀತಿವಿವರ್ಧನಾಃ| ರಸ್ಯಾಃ ಸ್ನಿಗ್ಧಾಃ ಸ್ಥಿರಾ ಹೃದ್ಯಾ ಆಹಾರಾಃ ಸಾತ್ವಿಕಪ್ರಿಯಾಃ|| (ಗೀತೆ.17.8.) – ನಾವು ಸೇವಿಸಿದ ಆಹಾರವು ನಮಗೆ ದೀರ್ಘ ಆಯಸ್ಸನ್ನೂ, ಸತ್ವಗುಣವನ್ನೂ, ಮಾನಸಿಕ-ದೈಹಿಕ ಬಲವನ್ನೂ, ಆರೋಗ್ಯವನ್ನೂ, ಸುಖವನ್ನೂ, ಪ್ರೀತಿಯನ್ನೂ ಹೆಚ್ಚಿಸುವಂತಹುದು ಆಗಿರಬೇಕು.  ಇಂತಹ ರಸಭರಿತವೂ, ಜಿಡ್ಡಿನಿಂದ ಕೂಡಿದುದೂ, ದೇಹದಲ್ಲಿ ಶಕ್ತಿಯು ಹೆಚ್ಚುಕಾಲ ಇರುವಂತೆ ಮಾಡುವುದೂ, ಮನಸ್ಸಿಗೆ ಮೆಚ್ಚುವಂತಹುದೂ ಆದ ಆಹಾರವು ಸಾತ್ವಿಕ ಆಹಾರವಾಗುತ್ತದೆ.  ಇಂತಹ ಆಹಾರವನ್ನು ಸೇವಿಸಿದ ವ್ಯಕ್ತಿಯ ದೇಹ, ಮನಸ್ಸು, ಬುದ್ಧಿಗಳು ಸಾತ್ವಿಕಗುಣವುಳ್ಳದ್ದಾಗಿರುತ್ತವೆ.  ರಾಜಸಿಕ ಆಹಾರ – ಕಟ್ವಮ್ಲಲವಣಾತ್ಯುಷ್ಣ ತೀಕ್ಷ್ಣರೂಕ್ಷವಿದಾಹಿನಃ| ಆಹಾರಾ ರಾಜಸಸ್ಯೇಷ್ಟಾ ದುಃಖಶೋಕಾಮಯಪ್ರದಾಃ|| (ಗೀತೆ.17.9.) – ಯಾವ ಆಹಾರವು ಮನಸ್ಸಿಗೆ ತಳಮಳವನ್ನೂ, ಬುದ್ಧಿಗೆ ಚಿಂತೆಯನ್ನೂ, ದೇಹಕ್ಕೆ ರೋಗವನ್ನೂ ತಂದೊಡ್ಡುತ್ತದೋ ಅದು ರಾಜಸಿಕ ಆಹಾರವಾಗಿರುತ್ತದೆ.  ಅತ್ಯಂತ ಕಹಿಯಾದ, ಹುಳಿಯಾದ, ಉಪ್ಪಾದ, ಬಿಸಿಯಾದ, ಖಾರವಾದ ರಸಹೀನವಾದ, ದಾಹವನ್ನುಂಟುಮಾಡುವ ಆಹಾರವು ರಾಜಸಿಕ ಆಹಾರದ ಶ್ರೇಣಿಗೆ ಸೇರುತ್ತದೆ.  ತಾಮಸಿಕ ಆಹಾರ – ಯಾತಯಾಮಂ ಗತರಸಂ ಪೂತಿ ಪಯರ್ುಷಿತಂ ಚ ಯತ್| ಉಚ್ಛಿಷ್ಟಮಪಿ ಚಾಮೇಧ್ಯಂ ಭೋಜನಂ ತಾಮಸಪ್ರಿಯಮ್|| (ಗೀತೆ.17.10.) – ನಾವು ಸೇವಿಸುವ ಆಹಾರವು ಆರಿದ್ದರೆ, ರಸಹೀನವಾಗಿದ್ದರೆ, ದುರ್ಗಂಧಯುಕ್ತವಾಗಿದ್ದರೆ, ಹಳಸಿದ್ದರೆ, ಅಶುದ್ಧವಾಗಿದ್ದರೆ, ಎಂಜಲಾಗಿದ್ದರೆ ಅದು ತಾಮಸ ಆಹಾರವಾಗುತ್ತದೆ.   ಇದನ್ನು ಸೇವಿಸಿದರೆ ಅತಿನಿದ್ರೆ, ಆಲಸ್ಯ, ದೈಹಿಕ-ಮಾನಸಿಕ ರೋಗಗಳು ತಪ್ಪಿದ್ದಲ್ಲ.  ಹೀಗೆ ಭಗವದ್ಗೀತೆಯಲ್ಲಿ ಆಹಾರವು ನಮ್ಮ ಮೇಲುಂಟುಮಾಡುವ ಪರಿಣಾಮದ ಆಧಾರದಲ್ಲಿ ಮೂರುವಿಧವಾಗಿ ವಿಂಗಡಿಸಲ್ಪಟ್ಟಿದೆ.  ಸದಾ ಆರೋಗ್ಯವಾಗಿ, ಸುಖಿಯಾಗಿ, ಲವಲವಿಕೆಯಿಂದ ಬದುಕಲಿಚ್ಛಿಸುವವರು ಸಾತ್ವಿಕ ಆಹಾರವನ್ನು ಸೇವಿಸುವುದು ಉತ್ತಮ.
ಇಂದು ಮನುಜ ಆಹಾರಸೇವನೆಗೆ ನಾಲಿಗೆಯನ್ನು ಮಾಪಕವಾಗಿರಿಸಿಕೊಂಡಿದ್ದಾನೆ.  ನಾಲಿಗೆಗೆ ರುಚಿಕರವಾದಂತಹ ಯಾವುದೇ ಆಹಾರ ಎಲ್ಲಿ ಕಂಡರೂ ಸಹ ಅದನ್ನು ಸೇವಿಸುತ್ತಾನೆ.  ಅದೇ ಆತನ ದೈಹಿಕ-ಮಾನಸಿಕ ಅನಾರೋಗ್ಯಗಳಿಗೆ ಕಾರಣವಾಗಿರುತ್ತದೆ.  ಈ ಬಗ್ಗೆ ಸಂಸ್ಕೃತದಲ್ಲಿ ಒಂದು ಸುಭಾಷಿತವಿದೆ – ಜಿಹ್ವೇ ಪ್ರಮಾಣಂ ಜಾನೀಹಿ ಭಾಷಣೇ ಭೋಜನೇ ತಥಾ|  ಅತ್ಯುಕ್ತಿರತಿಭುಕ್ತಿಶ್ಚ ಸದ್ಯಃ ಪ್ರಾಣಾಪಹಾರಿಣೀ|| – ಹೇ ನಾಲಿಗೆಯೇ! ಆಹಾರಸೇವನೆಯಲ್ಲಿ ಮತ್ತು ಮಾತಿನ ವಿಷಯದಲ್ಲಿ ಪ್ರಮಾಣವನ್ನು ತಿಳಿ.  ಹೆಚ್ಚು ಮಾತು ಮತ್ತು ಹೆಚ್ಚು ಆಹಾರಸೇವನೆ ಅತಿ ಬೇಗ ನಮ್ಮನ್ನು ಮರಣಶಯ್ಯೆಯಲ್ಲಿ ಮಲಗಿಸುತ್ತದೆ.  ಇದರ ಅರ್ಥ ಸರಳವಾಗಿದ್ದರೂ ಅತ್ಯಂತ ಮಾಮರ್ಿಕವಾದ ವಿಚಾರ ಇದರಲ್ಲಿ ಅಡಗಿದೆ.  ನಾಲಿಗೆಗೆ ರುಚಿಯೆಂದು ರಾಜಸಿಕವಾದ ಮತ್ತು ತಾಮಸಿಕವಾದ ಆಹಾರವನ್ನು ಹೊಟ್ಟೆಗೆ ಹಾಕಿದರೆ ಅದು ಆಹಾರವನ್ನು ತುಂಬಿಕೊಳ್ಳುವ ಚೀಲವಾಗುತ್ತದೆಯೇ ಹೊರತು, ಶಕ್ತಿಯನ್ನಾಗಿ ಪರಿವತರ್ಿಸುವ ತಾಣವಾಗುವುದಿಲ್ಲ.  ಹಾಗೆಯೇ ನಾಲಿಗೆಯ ರುಚಿಗಾಗಿ ಅತಿಯಾಗಿ ಆಹಾರವನ್ನು ಸೇವಿಸಿದರೆ ಜೀಣರ್ಾಂಗಗಳು ತಮ್ಮ ಶಕ್ತಿಯನ್ನು ಬೇಗನೇ ಕಳೆದುಕೊಂಡು ನಾನಾ ರೋಗಗಳಿಗೆ ಕಾರಣವಾಗುತ್ತದೆ.  ಹಾಗಾಗಿಯೇ ನಾಲಿಗೆಯ ರುಚಿಗಾಗಲ್ಲದೆ ಸ್ವಾಸ್ಥ್ಯರಕ್ಷಣೆಗಾಗಿ ಹಿತವಾಗಿ, ಮಿತವಾಗಿ ಆಹಾರಸೇವನೆ ಮಾಡಬೇಕೆಂಬುದೇ ಈ ಶ್ಲೋಕದ ತಾತ್ಪರ್ಯ.  ಆದ್ದರಿಂದಲೇ ನಮ್ಮ ಹಿರಿಯರು ‘ಹಿತಭುಕ್, ಮಿತಭುಕ್, ಋತುಭುಕ್’ ಎಂಬ ಆಹಾರಸೂತ್ರವನ್ನು ನಮಗೆ ನೀಡಿದ್ದಾರೆ.
‘ಅನ್ನಾದ್ವೈ ಪ್ರಜಾಃ ಪ್ರಜಾಯಂತೇ|’ (ತೈತ್ತಿರೀಯೋಪನಿಷತ್.2.2.) ಎಂದ ಉಪನಿಷತ್ತು ಅನ್ನದಿಂದಲೇ ಮನುಷ್ಯರು ಜೀವಿಸುತ್ತಾರೆ ಎಂದೂ ತಿಳಿಸುತ್ತದೆ.  ‘ಅಥೋ ಅನ್ನೇನೈವ ಜೀವಂತಿ’ (ತೈತ್ತಿರೀಯೋಪನಿಷತ್.2.2.). ಆದ್ದರಿಂದ ಅನ್ನವಿಲ್ಲದೇ ಮನುಷ್ಯ ಬದುಕಲಾರ ಎಂಬುದು ಸತ್ಯ.  ಆದರೆ ಅನ್ನವು ಅತಿಯಾದರೂ ಸಹ ಮನುಷ್ಯನು ಬದುಕಲಾರ! ಉಪನಿಷತ್ತು ನಮಗೆ ತಿಳಿಸುವುದೇನೆಂದರೆ ನಾವು ತಿನ್ನುವಂತಹ ಆಹಾರವು ನಮ್ಮ ಮನಸ್ಸನ್ನು, ದೇಹವನ್ನು ಶಕ್ತಿಯುತವಾಗಿಸಬೇಕೇ ಹೊರತು ರೋಗಗಳ ಗೂಡಾಗಲ್ಲ.  ಆದ್ದರಿಂದಲೇ ಉಪನಿಷತ್ತು ಅನ್ನವನ್ನು ಔಷಧವೆಂದು ಸಂಬೋಧಿಸಿದೆ – ‘ಅನ್ನಂ ಹಿ ಭೂತಾನಾಂ ಜ್ಯೇಷ್ಠಮ್| ತಸ್ಮಾತ್ ಸವರ್ೌಷಧಮುಚ್ಯತೇ’|| (ತೈತ್ತಿರೀಯೋಪನಿಷತ್.2.2.) – ಸರ್ವಜೀವಿಗಳಿಗೂ ಸಹ ಅನ್ನವೇ ಶ್ರೇಷ್ಠ.  ಆದ್ದರಿಂದ ಅನ್ನವೇ ಜೀವಿಗಳಿಗೆಲ್ಲಾ ಔಷಧ. ನಾವು ಸೇವಿಸುವ ಆಹಾರವೇ ನಮಗೆ ಔಷಧವಾಗಬೇಕು.  ಆದರಿಂದು ನಮಗೆ ಔಷಧವೇ ಆಹಾರವಾಗಿದೆ!  ಅದಕ್ಕೆ ಕಾರಣ ನಮ್ಮ ವಿವೇಚನೆಯಿಲ್ಲದ ಆಹಾರಸೇವನೆ.  ನಾವಿಂದು ಸುಖ, ಶಾಂತಿ, ನೆಮ್ಮದಿ, ಆರೋಗ್ಯಗಳನ್ನು ಬಯಸುತ್ತೇವೆ.  ಆದರೆ ಅದಕ್ಕನುಗುಣವಾದ ಮಾರ್ಗವನ್ನು ಅನುಸರಿಸುತ್ತಿಲ್ಲ.  ಅನ್ನದ ಬಗೆಗಿನ ಅಜ್ಞಾನವನ್ನು ಕಳೆದುಕೊಂಡು ಅನ್ನವನ್ನು ಅರಿಯೋಣ, ಅರಿತಂತೆ ಆಚರಿಸೋಣ.
– ಉಮೇಶ ಹೆಗಡೆ –

Leave a Reply