CATEGORIES

NEWSLETTER


ಅನರ್ಘ್ಯ ರತ್ನಗಳು


ಸೂಫಿ ಸಾಧಕರಲ್ಲಿ ಹಲವಾರು ಮಹಿಳೆರದೂ   ಪಾತ್ರವಿದೆ.  ಅವರಲ್ಲಿ ಆರನೇ ಶತಮಾನದಲ್ಲಿ ಇದ್ದ ರಬಿಯಾ ಒಬ್ಬ ಮಹಾನ್ ಸಾಧಕಿ.  ಆಕೆಗೆ ಭಗವಂತನಲ್ಲಿ ಅಪಾರವಾದ ನಂಬುಗೆ ಮತ್ತು ಶರಣಾಗತಿ.  ಈಕೆಯ ಜೀವನದಲ್ಲಿ ನಡೆದ ಒಂದು ಘಟನೆ ಇವಳ ಸಂಪೂರ್ಣ  ಶರಣಾಗತಿಯನ್ನು ಸಾದರ ಪಡಿಸುತ್ತದೆ.
ತನಗೆ ಇದ್ದ ಪ್ರಾಯದ ಅವಳಿ  ಗಂಡು ಮಕ್ಕಳು ಹೊಲದಲ್ಲಿ ಕೆಲಸ ಮಾಡುವಾಗ ಸಿಡಿಲಿನ ಹೊಡೆತಕ್ಕೆ ಸಿಕ್ಕಿ ಅಸು ನೀಗುತ್ತಾರೆ.   ಇವರ ಪಾರ್ಥಿವ ಶರೀರವನ್ನು ಮನೆಗೆ ತಂದ ಸುತ್ತಮುತ್ತಲಿನವರು ರಬಿಯಾಗೆ ಎಲ್ಲವನ್ನು ವಿವರಿಸುತ್ತಾರೆ. ತನಗಾದ ದುಃಖವನ್ನು ಕ್ಷಣಮಾತ್ರದಲ್ಲಿ ಸಾವರಿಸಿಕೊಂಡು, ಆ ಮಕ್ಕಳ ಪಾರ್ಥಿವ ಶರೀರವನ್ನು ಒಂದು ಕೋಣೆಯಲ್ಲಿ ಇರಿಸಿಕೊಂಡಳು.   ತನ್ನನ್ನು ಸಂತೈಸಲು ಬಂದವರಿಗೆ ” ದಯಮಾಡಿ ನೀವೆಲ್ಲ ಈಗ ಇಲ್ಲಿಂದ ಹೋಗಿ.  ನನ್ನ ಯಜಮಾನರು ಬರುವ ಸಮಯ.  ಅವರಿಗೆ ಒಮ್ಮೆಲೇ ಈ ಆಘಾತವನ್ನು ತಡೆದುಕೊಳ್ಳುವ ಶಕ್ತಿ ಇಲ್ಲ.  ಅವರನ್ನು ಸಂತೈಸಿ ನಂತರ   ಹೇಳುತ್ತೇನೆ ” ಎಂದು ಎಲ್ಲರನ್ನು ಬೀಳ್ಕೊಟ್ಟಳು.
ಸ್ವಲ್ಪ ಸಮಯದಲ್ಲೇ ಬಂದ ಗಂಡನಿಗೆ ಎಂದಿನಂತೆ ಉಣ್ಣಲು ಬಡಿಸಿ, ನಂತರದಲ್ಲಿ ನಿಧಾನವಾಗಿ ಮಾತಿಗೆ ಎಳೆಯುತ್ತ  ” ನಾನು ನಿಮ್ಮಲ್ಲಿ ಒಂದು ವಿಚಾರವನ್ನು ಹಲವಾರು ವರ್ಷಗಳಿಂದ ಹೇಳದೆ ರಹಸ್ಯವಾಗಿ ಇಟ್ಟಿರುವೆ. ಇದಕ್ಕಾಗಿ ನೀವು ನನ್ನನ್ನು ಕ್ಷಮಿಸಬೇಕು.  ಇಂದು ಆ ವಿಚಾರವನ್ನು ಹೇಳಲೇ ಬೇಕಾದ ಸಮಯ ಬಂದಿದೆ. ” ಎಂದು ಪೀಟಿಕೆ ಹಾಕಿದಳು.  ರಬಿಯಾಲನ್ನು  ಅಪಾರ ಗೌರವದಿಂದ ನೋಡುತ್ತಿದ್ದ  ಗಂಡ ಕಾತರದಿಂದ “ಅದೇನು?” ಎಂದು ಕೇಳಿದ.  ” ಬಹಳ ವರ್ಷಗಳ ಹಿಂದೆ ನಮ್ಮ ಮನೆಗೆ ಬಂದ ಒಬ್ಬ ಸಾಧು ಪುರುಷರು ನನ್ನಲ್ಲಿ ಎರಡು ಅನರ್ಘ್ಯ ರತ್ನಗಳನ್ನು ಕೊಟ್ಟು, ಇದನ್ನು ಜೋಪಾನವಾಗಿ   ಕಾಪಾಡು, ನಾನು ಬೇಕಾದಾಗ ಬಂದು ವಾಪಾಸು ಪಡೆಯುತ್ತೇನೆ. ಎಂದು ಹೇಳಿ ಹೋದವರು ವರ್ಷಗಳು ಕಳೆದರು ಬರಲೇ ಇಲ್ಲ.  ನಾನು ಆ ರತ್ನಗಳನ್ನು ನನ್ನವೇ ಎಂದು ಅದರ ಮೇಲೆ ಮೋಹ ಬೆಳೆಸಿಕೊಂಡು ಬಿಟ್ಟೆ.  ಆದರೆ, ಅವರು ಈಗ ಬಂದು ಅವರ  ರತ್ನಗಳನ್ನು ವಾಪಾಸು ಕೇಳುತ್ತಿದ್ದಾರೆ.  ದಿಕ್ಕೇ ತೋಚದೆ ನಿಮ್ಮನ್ನು ಕೇಳಿ ಕೊಡುವೆನೆಂದು ಹೇಳಿ ಕಳುಹಿದೆ.  ಈ ಗ ಹೇಳಿ ನಾನೇನು ಮಾಡಲಿ? ”  ಎಂದು ಖಿನ್ನಳಾಗಿ ಹೇಳಿದಳು.   ಸಾವಕಾಶವಾಗಿ ಎಲ್ಲವನ್ನು ಕೇಳಿದ ಗಂಡ ” ರಬಿಯ, ನಿನಗೆ ಹೇಳುವುದೇನಿದೆ?  ಪರರ ವಸ್ತುವನ್ನು ಎಂದೂ ನೀನು ಇಟ್ಟುಕೊಂಡವಳಲ್ಲ.  ಈಗ ಯಾಕೆ ಆ ಚಿಂತೆ? ಅವರ ರತ್ನಗಳನ್ನು ಅವರಿಗೆ ವಾಪಾಸು ಕೊಟ್ಟುಬಿಡು.” ಎಂದು ಸ್ಪಷ್ಟವಾಗಿ ಹೇಳಿದ.
ಈ ಮಾತು ಕೇಳಿದ ನಂತರ ರಬಿಯ ತನ್ನ ಗಂಡನ ಕೈ ಹಿಡಿದುಕೊಂಡು  ಮಕ್ಕಳ ಶವ ಇರಿಸಿದ್ದ ಕೋಣೆಗೆ ಕರೆದೊಯ್ದಳು.  ಮಕ್ಕಳ ಶವ ನೋಡಿದ ಗಂಡ ಪ್ರಜ್ಞೆ ತಪ್ಪಿದ.   ಸಾವರಿಸಿಕೊಂಡ ನಂತರ, ರಬಿಯ ಸಮಾಧಾನದಿಂದ ಹೇಳಿದಳು, ” ಇವೆ, ಆ ಅನರ್ಘ್ಯ ರತ್ನಗಳು.  ಭಗವಂತ ನಮ್ಮಲಿ ಜೋಪಾನವಾಗಿ ಇಡಬೇಕೆಂದು ಹೇಳಿ ಕಳುಹಿಸಿದ್ದ.  ಇಂದು ಅವನು ವಾಪಾಸು ಕೇಳಿದ. ಆತನ ರತ್ನಗಳನ್ನು ಇಲ್ಲಿಯವರೆಗೆ ಜೋಪಾನ ಮಾಡಿದ್ದೇವೆ .  ಈಗ ಕೊಡಬೇಕಲ್ಲವೇ?  ಬನ್ನಿ ಅವನ ರತ್ನಗಳನ್ನು ಸಂತೋಷದಿಂದ ಹಿಂತಿರುಗಿಸೋಣ.”  ಎಂದು ಇಬ್ಬರು ಸೇರಿ ಶವ ಸಂಸ್ಕಾರ ನೆರೆವೇರಿಸಿದರು.
ರಬಿಯಾಲ ಜೀವನದಲ್ಲಿ ಇದೊಂದು ಬಹು ದೊಡ್ಡ ಪರೀಕ್ಷೆಯಾಗಿತ್ತು.  ಆ ಸಮಯದಲ್ಲೂ ತನ್ನ ಚಿತ್ತವನ್ನು ಕಳೆದುಕೊಳ್ಳದೆ ಸಮಚಿತ್ತದಿಂದ ಸಂಪೂರ್ಣವಾಗಿ ಭಗವಂತನಲ್ಲಿ ಶರಣಾಗತಿ ಹೊಂದಿದಳು. ಇವಳ ಜೀವನದ  ಆದರ್ಶಗಳು ಇಂದಿಗೂ ಜನಮಾನಸದಲ್ಲಿ   ಚಿರಸ್ಥಾಯಿಯಾಗಿ ಉಳಿದುಕೊಂಡಿದೆ.

2 Responses to ಅನರ್ಘ್ಯ ರತ್ನಗಳು

  1. Manjunath Bangar

    ಸೈರಣೆ ವೆನ್ನುವ ಗುಣ ಅತಿ ದೊಡ್ಡದು

  2. Prakash H N

    I read this article in karunaalu baa belake by Dr Gururaja karjagi. Nice to read once again.

    Prakash

Leave a Reply