ಅಧ್ಯಾತ್ಮ ಜೀವನ ………………………..ಒಂದಷ್ಟು ಚಿಂತನೆ
ನಮ್ಮ ದಿನನಿತ್ಯದ ಬದುಕಿನಲ್ಲಿ ಹಲವಾರು ದೋಷಗಳನ್ನು ನಾವು ಇತರರಲ್ಲಿ ಗುರುತಿಸುತ್ತೇವೆ. ನಮ್ಮಲ್ಲೂ ಹಲವಾರು ದೋಷಗಳು ಇರುತ್ತವೆ. ಆದರೆ, ನಮ್ಮ ದೋಷಗಳು ನಮ್ಮ ಅರಿವಿಗೆ ಬಂದರು ಅದನ್ನು ಇತರರ ಜೊತೆ ಹೋಲಿಕೆ ಮಾಡಿಕೊಳ್ಳುತ್ತ ನಮ್ಮದೇನು ಪರವಾಗಿಲ್ಲ ಎಂದು ಸುಮ್ಮನಾಗಿ ಬಿಡುತ್ತೇವೆ. ಸ್ನೇಹಿತರು, ಆಪ್ತರು ಗುರುತಿಸಿ ದೋಷ ಎತ್ತಿ ಹಿಡಿದಾಗ ನಾವು ಸುಮ್ಮನೆ ಒಪ್ಪಿಕೊಳ್ಳುವುದಿಲ್ಲ, ನಮ್ಮ ದೋಷಗಳನ್ನು, ದೋಷವೇ ಅಲ್ಲವೆಂದು ಹಲವಾರು ರೀತಿಯಲ್ಲಿ ಸಮಜಾಯಿಷಿ ಕೊಟ್ಟು ಸಾಬೀತು ಮಾಡಲು ಹವಣಿಸುತ್ತೇವೆ. ತಾವು ನಂಬಿಕೊಂಡಿರುವ ಸತ್ಯ ಅದೆಂದು ವಾದಿಸುತ್ತೇವೆ, ಕಾರಣಗಳನ್ನು ನೀಡಿ ಸರಿ ಇರಬಹುದೇನೋ ಎನ್ನುವಂತಹ ಭ್ರಮೆ ಹುಟ್ಟಿಸಲು ಪ್ರಯತ್ನಿಸುತ್ತೇವೆ. ಆದರೆ, ಈ ಯಾವ ಕಸರತ್ತುಗಳು ನಮ್ಮ ದೋಷವನ್ನು ಸರಿಪಡಿಸಲಾರವು. ನಮ್ಮ ಅಹಂಕಾರದ ವಸ್ತ್ರ ಕಳಚಿಬಿದ್ದಾಗ, ಸತ್ಯದ ಎದುರು ಬೆತ್ತಲಾದಾಗ ಹೊಸ ಬೆಳಕು ದಾರಿ ತೋರುತ್ತವೆ. ಅಜ್ಞಾನದ ಅಂಧತ್ವ ಕಳೆದ ನಂತರವಷ್ಟೇ ಜ್ಞಾನದ ಕಣ್ಣು ತೆರೆಯುವುದು.
ಒಬ್ಬ ಪಂಡಿತ ಮಹಾಶಯ ಪ್ರತಿನಿತ್ಯ ಭಗವದ್ಗೀತೆಯ ಉಪನ್ಯಾಸ ಮಾಡುತ್ತಿದ್ದ . ಈತನ ಉಪನ್ಯಾಸ ಕೇಳಲು ಹತ್ತಿರದ ಹಳ್ಳಿಗಳಿಂದ ಜನ ಬರುತ್ತಿದ್ದರು. ಈತನ ಉಪನ್ಯಾಸ ಕೇಳಿ ಭಕ್ತಿ ಭಾವದಿಂದ ಪಂಡಿತನ ಕಾಲಿಗೆರೆಗುತ್ತಿದ್ದರು. ಉಪನ್ಯಾಸದ ಬಗ್ಗೆ ಪ್ರಶಂಸೆಯ ಮಾತುಗಳನ್ನು ಹೇಳುತ್ತಿದ್ದರು. ಸರಸ್ವತಿಯೇ ನಿಮ್ಮ ಬಾಯಿಂದ ನುಡಿಸುತ್ತಿದ್ದಾಳೆ ಎಂದೆಲ್ಲ ಹೊಗಳುತ್ತಿದ್ದರು. ಇಂತಹ ಉಪನ್ಯಾಸ ಕೇಳಿದ ನಾವೇ ಧನ್ಯರು ಎಂದೆಲ್ಲ ಸಭಿಕರು ಮಾತನಾಡಿಕೊಳ್ಳುತಿದ್ದರು. ದಿನಕಳೆದಂತೆ ಈ ಪಂಡಿತರ ಉಪನ್ಯಾಸದ ಜೊತೆಗೆ ಅಹಂಕಾರದ ಸ್ವಪ್ರಶಂಸೆ ನಿಧಾನವಾಗಿ ಸೇರ್ಪಡೆಯಾಯಿತು. ಜನಗಳು ಮುಂಚಿನರೀತಿಯಲ್ಲಿ ಬೆರೆಯಲು ಸ್ವಲ್ಪ ಹಿಂಜರಿಯಲು ಪ್ರಾರಂಭಿಸಿದರು. ಒಂದೆರಡು ತಿಂಗಳುಗಳ ನಂತರದಲ್ಲಿ ಉಪನ್ಯಾಸಕ್ಕೆ ಬರುವವರ ಸಂಖ್ಯೆ ಇಳಿಮುಖವಾಯಿತು. ಹೊಸ ವಿಚಾರಗಳೇನು ಇಲ್ಲ ಅದೇ ಹಳಸಲು ಮಾತು ಎಂದೆಲ್ಲ ಹೇಳಿಕೊಳ್ಳುವುದು ಪಂಡಿತ ಮಹಾಶಯರ ಕಿವಿಗೊ ಬಿತ್ತು. ಈಗ ಪಂಡಿತರಿಗೆ ಚಿಂತೆ ಕಾಡಲು ಪ್ರಾರಂಭವಾಯಿತು.
ಇಂತಹ ಸಂದಿಗ್ದ ಸಮಯದಲ್ಲಿ ಪಂಡಿತನ ಆಪ್ತಸ್ನೇಹಿತನೊಬ್ಬ ” ನಿನ್ನ ಉಪನ್ಯಾಸದಲ್ಲಿ ಹೊಸ ಹೊಸ ವಿಚಾರಗಳೇ ಇಲ್ಲವಾಗಿದೆ, ಅದೇ ಹಳೆಯ ವಿಚಾರಗಳು ಒಂದೇ ರೀತಿಯಲ್ಲಿ ಹೇಳಲಾಗುತ್ತಿದೆ. ನೀನು ನಿನ್ನ ಉಪನ್ಯಾಸದಲ್ಲಿ ಹೊಸ ವಿಚಾರಗಳ ಜೊತೆಗೆ ಉಪನ್ಯಾಸದ ಶೈಲಿಯನ್ನು ಬದಲಿಸಿಕೊ ” ಎಂದು ಸಲಹೆಯನ್ನು ನೀಡಿದ. ಈ ಸಲಹೆ ಕೇಳಿದ ಪಂಡಿತ ಹೌಹಾರಿದ. ” ಇನ್ಯಾವ ರೀತಿ ಹೇಳಬೇಕು? ನನ್ನ ಉಪನ್ಯಾಸದಲ್ಲಿ ಅದೆಷ್ಟು ಉದಾಹರಣೆ ನೀಡಿದ್ದೇನೆ. ವಿಷಯದಲ್ಲಿ ನನ್ನ ಅನುಭವ ಕೂಡ ಹಂಚಿಕೊಂಡಿದ್ದೇನೆ. ಇನ್ನೆನುಬೇಕು ಇವರಿಗೆ ? ” ಎಂದು ತನ್ನ ಸಿಟ್ಟನ್ನು ಹೊರಹಾಕಿದ. ಇದನ್ನು ಗಮನಿಸಿದ ಸ್ನೇಹಿತ ” ಅದೆಲ್ಲ ಸರಿ, ಆದರೂ ಏನೋ ಒಂದು ಕೊರತೆ ಇರಲೇಬೇಕಲ್ಲವೇ? ಸ್ವಲ್ಪ ಯೋಚಿಸು. ಒಂದು ಕೆಲಸ ಮಾಡೋಣ. ನನ್ನ ಪರಿಚಯದ ಒಬ್ಬ ಮೇಧಾವಿ ಹತ್ತಿರದ ವನದಲ್ಲಿ ಇದ್ದಾರೆ. ಅವರು ಗೀತಾರಹಸ್ಯ ತಿಳಿದಿರುವ ಮಹಾನ್ ಪಂಡಿತರು ಆಗಿದ್ದಾರೆ. ಅವರಲ್ಲಿ ಏಕೆ ಹೋಗಿ ವಿಚಾರವಿನಿಮಯ ಮಾಡಬಾರದು? ನಿನ್ನ ವಿಚಾರಗಳ ಜೊತೆಗೆ ಅವರ ವಿಚಾರಗಳು ಬೆರೆತರೆ ನಿನ್ನ ಉಪನ್ಯಾಸದಲ್ಲಿ ಒಂದು ಹೊಸತನ ಬರಬಹುದಲ್ಲವೇ? ” ಎಂದು ಮರುಸಲಹೆ ನೀಡಿದ. ಈ ಮಾತು ಪ್ರಾರಂಭದಲ್ಲಿ ಇಷ್ಟವಾಗಲಿಲ್ಲ . ಆದರೂ, ಹೊಸ ವಿಚಾರ ನನಗಿಂತ ಆತನೇನು ಹೇಳಬಲ್ಲ? ಎಂಬುದನ್ನು ತಿಳಿದೆಬಿಡೋಣ ಎಂದು ಪರೀಕ್ಷಾರ್ಥವಾಗಿ ಸ್ನೇಹಿತನ ಜೊತೆ ಹೋಗಲು ಒಪ್ಪಿಕೊಂಡ.
ಇಬ್ಬರು ನಿಗಧಿಯಾದ ದಿನ ಆ ಮೇಧಾವಿಗಳಲ್ಲಿ ಹೋಗಿ ನಮಸ್ಕರಿಸಿ ಕುಶಲ ವಿಚಾರಿಸಿದರು. ಬಂದ ವಿಷಯವನ್ನು ಹೇಳಿದರು.
ಆಗ ಪಂಡಿತ ಮಹಾಶಯರು ” ಸ್ವಾಮೀ, ನಾನು ತಮ್ಮ ಬಳಿ ಗೀತಾರಹಸ್ಯವನ್ನು ತಿಳಿಯಲು ಬಂದಿರುವೆ. ಆದರೆ, ನನ್ನ ಬಳಿ ಬಹಳ ಕಡಿಮೆ ಸಮಯವಿದೆ. ನನ್ನ ಕೆಲಸಗಳು ಬೇಕಾದಷ್ಟಿವೆ. ಆದ ಕಾರಣ ತಾವು ದಯಮಾಡಿ ನನ್ನನ್ನು ಬೇಗ ಕಳುಹಿಸುವ ಕೃಪೆ ಮಾಡಬೇಕು ” ಎಂದು ವಿನಂತಿಸಿದ. ಮೇಧಾವಿಗಳು ಮುಗುಳುನಕ್ಕು ” ತಮ್ಮಂತಹ ಪಂಡಿತರು ನಮ್ಮ ಕುಟೀರಕ್ಕೆ ದಯಮಾಡಿಸಿದ್ದೀರ, ನಿಮಗೆ ಯಾವ ಆತಿಥ್ಯವನ್ನು ನೀಡದೆ ಹೇಗೆ ಕಳುಹಿಸಲು ಸಾಧ್ಯ? ಸ್ವಲ್ಪ ಟೀ ಕುಡಿದು ಹೋಗುವಿರಂತೆ.” ಎಂದು ಸ್ವಲ್ಪ ಸಮಯದ ನಂತರ ಟೀ ಡಿಕಾಕ್ಷನ್ ತುಂಬಿದ ಲೋಟವನ್ನು ಪಂಡಿತರ ಮುಂದೆ ಇರಿಸಿದರು. ಮುಖ ಕಿವುಚಿಕೊಂಡ ಪಂಡಿತ ಮಹಾಶಯರು ” ನನಗೆ ಕಪ್ಪು ಟೀ ಕುಡಿದು ಅಭ್ಯಾಸವಿಲ್ಲ, ಸ್ವಲ್ಪ ಹಾಲು ಕೊಟ್ಟರೆ ಬೆರೆಸಿ ಕುಡಿಯುತ್ತೇನೆ.” ಎಂದರು. ಆಗ ಮೇಧಾವಿಗಳು ನಸುನಕ್ಕು ” ಹಾಲನ್ನು ಎಲ್ಲಿ ಹಾಕುತ್ತಿರಪ್ಪಾ? ಈಗಾಗಲೇ ಲೋಟ ಭರ್ತಿಯಾಗಿದೆಯಲ್ಲ? ” ಎಂದು ಛೇಡಿಸಿದರು. ” ಅದಕ್ಕೇನಂತೆ ಸ್ವಲ್ಪ ಟೀ ಖಾಲಿ ಮಾಡಿದರಾಯಿತು.” ಎಂದು ಸಮಜಾಯಿಷಿ ಕೊಟ್ಟರು ಪಂಡಿತರು. ಆಗ ಮೇಧಾವಿಗಳು ದೃಢತೆಯಿಂದ ” ಈಗಿನ ನಿಮ್ಮ ಸ್ಥಿತಿಯೂ ಇದೆ ಆಗಿದೆ.ನಿಮ್ಮೊಳಗಿರುವ ವಿಚಾರವನ್ನು ಸ್ವಲ್ಪ ಖಾಲಿ ಮಾಡಿ ಹೊಸ ವಿಚಾರಗಳಿಗೆ ಜಾಗ ಕೊಡಿ, ಆಗ ಹೊಸತು ತನ್ನಷ್ಟ್ತಕ್ಕೆ ತಾನೇ ಒಳಗೆ ಹೋಗುತ್ತದೆ.’ ಎಂದು ಮುಗುಳುನಕ್ಕರು.
ಹೌದು, ಇದೆ ನಮ್ಮ ಸ್ಥಿತಿ ಕೂಡಾ! ಬೇಡದ ವಿಚಾರಗಳು, ಸಿಟ್ಟು ಸೆಡವು, ಹೊಟ್ಟೆ ಕಿಚ್ಚು, ಬೇಡದ ನೆನಪುಗಳು, ದ್ವೇಷ ಇತ್ಯಾದಿಗಳು ನಮ್ಮೊಳಗೇ ಭರ್ತಿಯಾಗಿ ಕೂತುಬಿಟ್ಟಿದೆ. ಅಗತ್ಯ ಅನಗತ್ಯ ವಿಚಾರಗಳು ನಮ್ಮ ತಲೆಯಲ್ಲಿ ತುಂಬಿಹೋಗಿವೆ. ಈ ಕಾರಣದಿಂದ ಹೊಸ ಚಿಂತನೆಗಳು ಒಳಗೆ ಹೋಗಲು ಸಾಧ್ಯವಾಗುತ್ತಿಲ್ಲ. ನಮ್ಮ ತಂದೆ , ತಾಯಿ, ಗುರು ಹಿರಿಯರು ಕಲಿಸಿದ ವಿದ್ಯೆ, ವಿಚಾರಗಳು, ಸಂಸ್ಕೃತಿಯ ಚಿಂತನೆಗಳು ಆಧುನಿಕತೆಯ ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಹೀಗಾಗಿ ನಮ್ಮ ಅಹಂಕಾರ ತಲೆಯೆತ್ತಿ ನಿಂತು ಯಾವುದೇ ಇತರ ವಿಚಾರಗಳನ್ನು ಒಳಗೆ ಬರಲು ಬಿಡುತ್ತಲೇ ಇಲ್ಲ. ಅಹಂಕಾರವನ್ನು ಕಡಿಮೆ ಮಾಡಿಕೊಂಡರೆ ವಿನಯವಂತಿಕೆ ನಮ್ಮಲ್ಲಿ ಉದಯಿಸಿ ಹೃದಯವಂತಿಕೆಗೆ ಜಾಗ ಮಾಡಿಕೊಡುತ್ತದೆ. ಬಿರುಗಾಳಿ ಬಂದಾಗ ನೆಲಹುಲ್ಲು ತಲೆಬಾಗಿ ನಮಿಸುತ್ತದೆ. ಗಾಳಿನಿಂತಮೇಲೆ ತಲೆ ಎತ್ತಿ ನಿಲ್ಲುತ್ತದೆ. ಹೀಗೆಯೇ ನಮ್ಮ ಬದುಕು ಕೂಡಾ ಆಗಬೇಕು. ಒಳ್ಳೆಯ ವಿಚಾರಕ್ಕೆ ತಲೆ ಬಾಗುವುದನ್ನು ಕಲಿತಾಗ ತಲೆ ಎತ್ತಿ ಬದುಕಲು ಸಾಧ್ಯವಾಗುತ್ತದೆ. ಈ ಮಾರ್ಗ ಸಾಧನೆಯಲ್ಲಿ ನಮ್ಮ ತಪ್ಪನ್ನು ತಿದ್ದಿಕೊಂಡು, ದೋಷವನ್ನು ಒಪ್ಪಿಕೊಂಡು, ಸರಿ ಮಾರ್ಗದಲ್ಲಿ ಮುನ್ನಡೆಯುವ ಮನಸ್ಸು ಮಾಡಿದರೆ ಸಾಕು, ಅದುವೆ ಅದ್ಯಾತ್ಮ ಜೀವನ.
ಹೆಚ್ ಏನ್ ಪ್ರಕಾಶ್